ನೆಪೋಲಿಯನ್ 1-

	1769-1821. ಸೈನಿಕನಾಗಿ ಜೀವನವನ್ನಾರಂಭಿಸಿ 1804ರಿಂದ 1814ರವರೆಗೆ ಮತ್ತು 1815ರಲ್ಲಿ ನೂರು ದಿನಗಳ ಕಾಲ ಫ್ರಾನ್ಸಿನ ಚಕ್ರವರ್ತಿಯಾಗಿ, ಹಲವಾರು ಸುಧಾರಣೆಗಳನ್ನು ತಂದು ಫ್ರಾನ್ಸಿನ ಮತ್ತು ಪಶ್ಚಿಮ ಯೂರೋಪಿನ ಬಹುಭಾಗದ ಮೇಲೆ ತನ್ನ ಅಚ್ಚಳಿಯದ ಪ್ರಭಾವ ಬೀರಿದ ನೆಪೋಲಿಯನ್ ಬೋನಪಾರ್ಟ್ ಮೆಡಿಟರೇನಿಯನ್ ಸಮುದ್ರದಲ್ಲಿರುವ ಫ್ರೆಂಚ್ ದ್ವೀಪವಾದ ಕಾರ್ಸಿಕದ ಆಯಾಚೋದಲ್ಲಿ 1769ರ ಆಗಸ್ಟ್ 15ರಂದು ಜನಿಸಿದ. ನೆಪೋಲಿಯನ್ನಿನ ತಂದೆ ಕಾರ್ಲೊ ಬೊನಪಾರ್ಟನಿಗೆ ಇವನು ನಾಲ್ಕನೆಯ ಮಗು, ಬದುಕಿದ್ದ ಮಕ್ಕಳಲ್ಲಿ ಎರಡನೆಯವನು. ಕಾರ್ಸಿಕ ದ್ವೀಪ ಮೊದಲು ಇಟಲಿಯ ಜಿನೋವಾಗೆ ಸೇರಿದ್ದು. ನೆಪೋಲಿಯನ್ ಹುಟ್ಟುವುದಕ್ಕೆ ಸ್ವಲ್ಪ ಕಾಲ ಹಿಂದೆ ಫ್ರೆಂಚರ ವಶಕ್ಕೆ ಬಂದಿತ್ತು. ಆದಾಗ್ಯೂ ಆ ದ್ವೀಪದ ಪ್ರಜೆಯಾಗಿ ಅಲ್ಲಿಯ ವಾತಾವರಣದಲ್ಲಿ ಬಾಲ್ಯವನ್ನು ಕಳೆದ ನೆಪೋಲಿಯನ್, ಫ್ರಾನ್ಸ್ ತನ್ನ ತಾಯ್ನಾಡನ್ನು ನಾಶಮಾಡಿದ ಶತ್ರುದೇಶವೆಂದು ಭಾವಿಸಿ ತಾನು ಪರಕೀಯನೆಂದು ಹೇಳಿಕೊಳ್ಳುತ್ತಿದ್ದ. ಆದರೆ ಅವನ ಜೀವನ ಮತ್ತು ಸಾಧನೆಯೆಲ್ಲ ಫ್ರಾನ್ಸಿನ ಭವಿಷ್ಯದೊಂದಿಗೆ ಬೆರೆತಿತ್ತು. ಒಂಬತ್ತನೆಯ ವರ್ಷದಿಂದಲೆ ಅವನು ಇತರ ಫ್ರೆಂಚರಂತೆ ಫ್ರಾನ್ಸಿನಲ್ಲಿ ಶಿಕ್ಷಣ ಗಳಿಸಿದ.

  	ಅವನು ಮೂರು ಶಾಲೆಗಳಲ್ಲಿ ಶಿಕ್ಷಣ ಪಡೆದ. ಮೊದಲು ಸ್ವಲ್ಪ ಕಾಲ ಆಟನ್ನಿನ ಶಾಲೆಯಲ್ಲೂ ಅನಂತರ ಐದು ವರ್ಷಗಳ ಕಾಲ ಬ್ರಿಯೆನ್ನಿನ ಸೈನಿಕ ಕಾಲೇಜಿನಲ್ಲೂ ಅನಂತರ ಒಂದು ವರ್ಷ ಸೈನಿಕ ಅಕಾಡೆಮಿಯಲ್ಲೂ ಶಿಕ್ಷಣ ಪಡೆದ. ಅವನು ಪ್ಯಾರಿಸ್ಸಿನಲ್ಲಿದ್ದಾಗ ಅವನ ತಂದೆ ತೀರಿಕೊಂಡ. ಅವನ ಸಂಸಾರ ಕಷ್ಟವನ್ನೆದುರಿಸಬೇಕಾಯಿತು. ನೆಪೋಲಿಯನ್ ಹಿರಿಯ ಮಗನಾಗದಿದ್ದರೂ ಅದರ ಹೊಣೆಯನ್ನು ಹೊತ್ತ. ಆಗ ಅವನಿಗೆ 16 ವರ್ಷ. ಅಕಾಡೆಮಿಯ 51 ವಿದ್ಯಾರ್ಥಿಗಳ ಪೈಕಿ 42ನೆಯವನಾಗಿ ಅವನು ಪದವೀಧರನಾದ. ದ್ವಿತೀಯ ಲೆಫ್ಟೆನೆಂಟ್ ಆಗಿ ನೇಮಕ ಹೊಂದಿದ. 1789ರಲ್ಲಿ ಫ್ರಾನ್ಸಿನ ಕ್ರಾಂತಿ ಸಂಭವಿಸಿದಾಗ ಅವನಿಗೆ ಕೇವಲ 20 ವರ್ಷ. ಸೈನಿಕ ನೆಪೋಲಿಯನ್ನನ ಮೇಲೆ ಅದು ಪ್ರಭಾವ ಬೀರದಿದ್ದರೂ ಆ ಕ್ರಾಂತಿಯ ಪ್ರೇರಕರಾದ ವಾಲ್ಟೇರ್ ಮತ್ತು ರೂಸೋ ಇವರ ಬರಹಗಳಿಂದ ಪ್ರಭಾವಿತನಾಗಿ ಫ್ರಾನ್ಸಿನ ರಾಜಕೀಯ ಕ್ಷೇತ್ರದಲ್ಲಿ ಬದಲಾವಣೆ ಅನಿವಾರ್ಯವೆಂದು ಭಾವಿಸಿದ್ದ. 1793ರಿಂದ ಫ್ರಾನ್ಸಿನ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಲು ಅಲ್ಲಿಯ ಸನ್ನಿವೇಶ ಸಹಕಾರಿಯಾಯಿತು. ಅದೇ ವರ್ಷ ಟೂಲಾನಿನಲ್ಲಿ ಕ್ರಾಂತಿಯ ವಿರುದ್ಧ ಸೇನೆ ಸಿದ್ಧವಾದಾಗ, ನೆಪೋಲಿಯನ್ ಕ್ರಾಂತಿಸೇನೆಯ ನಾಯಕತ್ವ ವಹಿಸಿ ಆ ನಗರವನ್ನು ವಶಪಡಿಸಿಕೊಂಡ. ಆ ಸಂದರ್ಭದಲ್ಲಿ ನೆಪೋಲಿಯನ್ ತೋರಿದ ಶೌರ್ಯಕ್ಕಾಗಿ ಅವನನ್ನು ಬ್ರಿಗೇಡಿಯರ್ ಜನರಲ್ ಹುದ್ದೆಗೆ ಏರಿಸಲಾಯಿತು. 1795ರಲ್ಲಿ ಪ್ಯಾರಿಸ್ ನಗರದಲ್ಲಿ ರಾಜನ ಕಡೆಯವರು ಗೊಂದಲವನ್ನೆಬ್ಬಿಸಿದಾಗ ಮತ್ತೆ ನೆಪೊಲಿಯನ್ ಅವರನ್ನು ಅಡಗಿಸಿದ.

	ಆಗ ಫ್ರಾನ್ಸಿನ ಆಡಳಿತ ನಡೆಸುತ್ತಿದ್ದ ಐವರು ಸದಸ್ಯರ ಡೈರೆಕ್ಟರಿ ಸರ್ಕಾರ ಅವನ ಪರಾಕ್ರಮವನ್ನು ಮೆಚ್ಚಿ ಅವನನ್ನು 1796ರಲ್ಲಿ ಇಟಲಿಯಲ್ಲಿದ್ದ ಫ್ರೆಂಚ್ ಸೈನ್ಯದ ದಂಡನಾಯಕನಾಗಿ ನೇಮಿಸಿತು.

	ಫ್ರಾನ್ಸಿನ ಕ್ರಾಂತಿ ಮತ್ತು ವಿದೇಶಾಂಗ ನೀತಿಯ ವಿರುದ್ಧ ಯೂರೋಪಿನ ರಾಷ್ಟ್ರಗಳು ಒಂದುಗೂಡಿ ಒಕ್ಕೂಟವನ್ನು ಸ್ಥಾಪಿಸಿದಾಗ ಆ ದೇಶಕ್ಕೆ ಮಹಾ ವಿಪತ್ತು ಒದಗಿತ್ತು. ಇಟಲಿಯಲ್ಲಿ ನಡೆದ ಕದನಗಳಲ್ಲಿ ನೆಪೋಲಿಯನ್ ಸಾಮಥ್ರ್ಯ ಪ್ರದರ್ಶಿಸಿ ಅದ್ಭುತ ವಿಜಯಗಳನ್ನುಗಳಿಸಿ, ಮಹಾವೀರನೆನಿಸಿಕೊಂಡ. ಆಕಾರದಲ್ಲಿ ಕುಳ್ಳಾಗಿದ್ದ ನೆಪೋಲಿಯನ್ ಪ್ರಚಂಡ ವಿಜಯ ಗಳಿಸುವನೆಂಬ ನಂಬಿಕೆ ಅವನ ಅನುಯಾಯಿಗಳಲ್ಲಿ ಕಿಂಚಿತ್ತೂ ಇರಲಿಲ್ಲ. ಆದರೆ ಅವರಿಗೆ ಆಶ್ಚರ್ಯವಾಯಿತು. ಅವರು ಅವನನ್ನು ಲಿಟ್‍ಲ್ ಕಾರ್ಪೊರಲ್ ಎಂದು ಕರೆದು ಗೌರವಿಸಿದರು. ಫ್ರೆಂಚ್ ಸರ್ಕಾರ ಅವನನ್ನು ಅಭಿನಂದಿಸಿತು. ನೆಪೋಲಿಯನ್ ಪ್ಯಾರಿಸಿಗೆ ಹಿಂತಿರುಗಿದಾಗ ಅವನಿಗೆ ಅಭೂತಪೂರ್ವ ಸ್ವಾಗತ ದೊರಕಿತು.

	ಅವನು ಇಟಲಿಯ ಬಹುಭಾಗವನ್ನು ಗೆದ್ದದ್ದು ಒಂದು ಮಹಾಸಾಧನೆ. ಆದರೆ ಅಷ್ಟಕ್ಕೆ ಅವನ ಕೆಲಸ ಪೂರೈಸಲಿಲ್ಲ. ಮುಖ್ಯವಾಗಿ ಒಕ್ಕೂಟದ ಬೆನ್ನೆಲುಬಿನಂತಿದ್ದ ಬ್ರಿಟಿಷರನ್ನು ಸದೆಬಡಿದು, ಅವರ ನೌಕಾಬಲವನ್ನು ಕುಂಠಿತಗೊಳಿಸಿ ಅವರ ಸಾಮ್ರಾಜ್ಯವನ್ನು ನಾಶ ಮಾಡಿದರೆ ಮಾತ್ರ ಫ್ರಾನ್ಸಿನ ಕ್ರಾಂತಿಗೆ ವಿಜಯವೆಂದು ತಿಳಿದ ಸರ್ಕಾರ, ನೆಪೊಲಿಯನ್ನನನ್ನು ಆ ಕೆಲಸಕ್ಕೆ ನೇಮಿಸಿತು. ಅವನಿಗೆ ಬೇಕಾದ್ದು ಅದೇ ಆಗಿತ್ತು. ವ್ಯಾಪಾರವರ್ಧನೆ, ವಸಾಹತುಗಳ ಸ್ಥಾಪನೆ ಮತ್ತು ಸಾಮ್ರಾಜ್ಯದ ವಿಸ್ತರಣೆಯಲ್ಲಿ ಪರಸ್ಪರ ಸ್ಪರ್ಧಿಗಳಾಗಿದ್ದ ಫ್ರೆಂಚ್ ಮತ್ತು ಇಂಗ್ಲಿಷರ ತಿಕ್ಕಾಟದಲ್ಲಿ ಇಂಗ್ಲಿಷರನ್ನು ಸೋಲಿಸದೆ ಹೋದರೆ ಫ್ರೆಂಚರ ಭವಿಷ್ಯ ನಿರಾಶಾದಾಯಕವೆಂದು ನೆಪೋಲಿಯನ್ ತಿಳಿದಿದ್ದ.

	ಮುಖ್ಯವಾಗಿ ಈಜಿಪ್ಟಿನ ಹತೋಟಿಯಲ್ಲಿದ್ದ ಸೂಯೆಜ್ ಪ್ರದೇಶವನ್ನು ವಶಪಡಿಸಿಕೊಂಡರೆ ಪೂರ್ವದೇಶಗಳ ಬೀಗದ ಕೈ ಸಿಕ್ಕಂತೆಯೇ ಎಂದು ತಿಳಿದಿದ್ದ ನೆಪೋಲಿಯನ್ ಇಂಗ್ಲಿಷ್ ನೌಕಾಪಡೆಯನ್ನು ಸೋಲಿಸಲು ಸನ್ನದ್ಧನಾದ. 1798ರಲ್ಲಿ ಕೈರೋ ಬಳಿ ನಡೆದ ಕದನದಲ್ಲಿ ವಿಜಯಿಯಾದ ನೆಪೋಲಿಯನ್ ಇಂಗ್ಲಿಷರ ವಿರುದ್ಧ ಹೋರಾಡುತ್ತಿದ್ದ ಮೈಸೂರಿನ ಟೀಪುವಿಗೆ ಸಹಾಯ ನೀಡಲು ಭಾರತಕ್ಕೆ ಬರಲು ಸಾಧ್ಯವಾಗಬಹುದೆಂದು ಊಹಿಸಿದ. ಆದರೆ ಬ್ರಿಟಿಷ್ ನೌಕಾಪಡೆ ನೆಲ್ಸನ್ನನ ದಕ್ಷನಾಯಕತ್ವದಲ್ಲಿ ನೈಲ್ ನದೀ ಪ್ರದೇಶಕ್ಕೆ ಬಂದು ಫ್ರೆಂಚ್ ನಾವೆಗೆ ವಿಪರೀತ ನಷ್ಟವನ್ನುಂಟುಮಾಡಿತು. ಇದರಿಂದ ನೆಪೋಲಿಯನ್ನನ ಪೂರ್ವದಿಕ್ಕಿನ ದಂಡಯಾತ್ರೆ ಕನಸಾಗಿಯೇ ಉಳಿಯಿತು.

	1799ರ ಆಗಸ್ಟ್ ವೇಳೆಗೆ ಫ್ರಾನ್ಸಿನ ಸ್ಥಿತಿ ಹದಗೆಟ್ಟಿತ್ತು. ಡೈರೆಕ್ಟರಿಯ ಆಡಳಿತ ಕುಸಿದು ಬೀಳುವ ಸ್ಥಿತಿಯಲ್ಲಿತ್ತು. ಜನತೆಗೆ ಸರ್ಕಾರದಲ್ಲಿ ನಂಬಿಕೆ ಮರೆಯಾಗತೊಡಗಿತು. ಇಂಥ ಗಂಭೀರ ಸನ್ನಿವೇಶದಲ್ಲಿ ಸ್ವದೇಶಕ್ಕೆ ಮರಳುವುದೇ ಸರಿಯೆಂದು ಭಾವಿಸಿ ನೆಪೋಲಿಯನ್ ಫ್ರಾನ್ಸಿಗೆ ಹಿಂದಿರುಗಿದ. ಅವನಿಲ್ಲದ ಕಾಲದಲ್ಲಿ ಫ್ರಾನ್ಸಿನ ವಿರುದ್ಧ ರಷ್ಯ ಇಂಗ್ಲೆಂಡ್ ಮತ್ತು ಆಸ್ಟ್ರಿಯಗಳು ಸೇರಿ ಒಕ್ಕೂಟ ಮಾಡಿಕೊಂಡು ಫ್ರೆಂಚರನ್ನು ಇಟಲಿಯಿಂದ ಓಡಿಸಿದವು. ಆದರೆ ರಷ್ಯ ತನ್ನ ಸೇನೆಯನ್ನು ಒಕ್ಕೂಟದಿಂದ ಹಿಂತೆಗೆದುಕೊಂಡಿದ್ದರಿಂದ ಒಕ್ಕೂಟ ಕುಸಿದುಬಿತ್ತು. ಆದರೂ ಡೈರಕ್ಟರಿಯ ಪ್ರತಿಷ್ಠೆ ಕುಗ್ಗಿತು.

	ಸರ್ಕಾರದ ದುರ್ಬಲತೆಯನ್ನು ಅರಿತ ನೆಪೋಲಿಯನ್ 1799ರ ನವೆಂಬರ್ 9ರಂದು ನಡೆದ ಸಂಚಿನಲ್ಲಿ ಭಾಗವಹಿಸಿ ಡೈರೆಕ್ಟರಿಯನ್ನು ತೆಗೆದುಹಾಕಿ, ಕಾನ್ಸುಲೇಟ್ ಎಂಬ ಹೊಸ ಸರ್ಕಾರವನ್ನು ಸ್ಥಾಪಿಸಲು ಸಹಾಯಕನಾದ. ಇದು 1700ರಿಂದ 1804ರವರೆಗೆ ಅಧಿಕಾರದಲ್ಲಿತ್ತು. ಮೂವರು ಕಾನ್ಸಲ್‍ಗಳಿದ್ದ ಸರ್ಕಾರದಲ್ಲಿ ನೆಪೋಲಿಯನನೇ ಪ್ರಥಮ ಕಾನ್ಸಲ್ ಆಗಿದ್ದ. ಈಜಿಪ್ಟಿನ ಆಡಳಿತದಲ್ಲಿ ಅನುಭವ ಹೊಂದಿದ್ದ ನೆಪೋಲಿಯನ್ ಫ್ರಾನ್ಸಿಗೆ ಸೂಕ್ತವಾದ ಸಂವಿಧಾನವನ್ನು ರೂಪಿಸಿದ. 1802ರಲ್ಲಿ ಅವನು ಅಜೀವ ಕಾನ್ಸಲ್ ಆದ. ಕೇವಲ ಐದು ವರ್ಷಗಳ ಅವಧಿಯಲ್ಲಿ ಅವನು ಅನೇಕ ಸುಧಾರಣೆಗಳನ್ನು ರೂಪಿಸಿ ಜಾರಿಗೆ ತಂದು ಪ್ರಪಂಚದ ಇತಿಹಾಸದಲ್ಲಿ ಅಮರತ್ವ ಪಡೆದ.

	ಫ್ರಾನ್ಸಿನ ಆಡಳಿತದ ನಾನಾ ಕ್ಷೇತ್ರಗಳಲ್ಲಿ ನೆಪೋಲಿಯನ್ ಪ್ರಗತಿ ಸಾಧಿಸಿದ. ಅವನು ಸ್ಥಾಪಿಸಿದ ಆಡಳಿತ ಯಂತ್ರ ಫ್ರಾನ್ಸಿನ ರಾಜಕೀಯ ಸಂಸ್ಥೆಗಳಲ್ಲಿ ಶಾಶ್ವತವಾದ ಸ್ಥಾನ ಪಡೆಯಿತು. ದೇಶದ ಆರ್ಥಿಕ ಸ್ಥಿತಿಯನ್ನು ಸುಧಾರಿಸಿ ಅದರ ಆದಾಯವನ್ನು ಹೆಚ್ಚಿಸಿದ. 1800ರಲ್ಲಿ ಬ್ಯಾಂಕ್ ಆಫ್ ಫ್ರಾನ್ಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ದೇಶದ ಆರ್ಥಿಕ ಮತ್ತು ಹಣಕಾಸಿನ ವ್ಯವಹಾರವನ್ನು ಕೇಂದ್ರೀಕರಿಸಿದ. ಆಡಳಿತದಲ್ಲಿ ದಕ್ಷತೆ ಹೆಚ್ಚಿಸುವ ಸಲುವಾಗಿ ಲಂಚಕೋರ ಅಧಿಕಾರಿಗಳನ್ನು ವಜಾಮಾಡಿ ಮಿತವ್ಯಯ ನೀತಿ ಅನುಸರಿಸಿದ. ದೇಶದ ವಿದ್ಯಾಭ್ಯಾಸ ಕ್ರಮದಲ್ಲಿ ಅವಶ್ಯವಾದ ಸೂಕ್ತ ಬದಲಾವಣೆಗಳನ್ನು ಜಾರಿಗೆ ತಂದ. ಪ್ರಾಥಮಿಕ ವಿದ್ಯಾಭ್ಯಾಸ, ಪ್ರೌಢ ಶಾಲೆಗಳು, ವೈಜ್ಞಾನಿಕ ಸಂಸ್ಥೆಗಳು, ತಾಂತ್ರಿಕ ಶಾಲೆಗಳೂ, ಸೈನಿಕ ಶಿಕ್ಷಣ- ಇವೆಲ್ಲ ಸ್ಥಾಪಿಸಿದ. ಆ ಕಾಲದಲ್ಲೇ ಅನೇಕ ಕಾಮಗಾರಿಗಳು ನಡೆದವು. ದೇಶದ ವಾಣಿಜ್ಯ ಮತ್ತು ಸಾರಿಗೆ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಗತಿ ಸಾಧಿತವಾಯಿತು. ಫ್ರಾನ್ಸಿನ ಇಂದಿನ ಹೆದ್ದಾರಿಗಳು ಅವನ ಕಾಲದಲ್ಲಿ ನಿರ್ಮಿತವಾದವು.

	ಎಲ್ಲರಿಗೂ ಸಮ್ಮತವಾದ ಧಾರ್ಮಿಕ ನೀತಿಯನ್ನು ರೂಪಿಸಿದ್ದೂ ಅದೇ ಕಾಲದಲ್ಲಿ. ದೇಶದ ಮತೀಯ ಸಮಸ್ಯೆ ಜಟಿಲವಾಗಿತ್ತು; ಗುಂಪುಗಳ ನಡುವೆ ತಿಕ್ಕಾಟಕ್ಕೆ ಕಾರಣವಾಗಿತ್ತು. ಇದರಿಂದ ದೇಶದಲ್ಲಿ ಧಾರ್ಮಿಕ ಶಾಂತಿ ಇರಲಿಲ್ಲ. ಮುಖ್ಯವಾಗಿ ಕ್ಯಾತೊಲಿಕ್ ಗುಂಪಿನವವರು ನೆಮ್ಮದಿಯಿಂದ ಇರಲು ಸಾಧ್ಯವಾಗಿರಲಿಲ್ಲ. ಈ ಸಮಸ್ಯೆಯನ್ನು ಪರಿಹರಿಸಿದರೆ ಮಾತ್ರ ನೆಮ್ಮದಿ, ಶಾಂತಿ ಮತ್ತು ಪ್ರಗತಿ ಸಾಧ್ಯವೆಂದು ಅರಿತ ನೆಪೊಲಿಯನ್ ತನ್ನ ಮತ್ತು ಪೋಪನ ನಡುವೆ ಶಾಂತಿಯ ಒಪ್ಪಂದ ಮಾಡಿಕೊಂಡ.

	ಫ್ರಾನ್ಸಿಗೆ ಮಾತ್ರವಲ್ಲದೆ ಯೂರೋಪಿಗೇ ನೆಪೋಲಿಯನ್ನನ ಅತ್ಯುತ್ತಮ ಕಾಣಿಕೆಯೆಂದರೆ ಕೋಡ್ ನೆಪೋಲಿಯನ್ ಎಂಬ ಕಾನೂನು ಸಂಹಿತೆ. ಇದು ಅವನ ರಾಜನೀತಿಜ್ಞತೆಗೆ ಸಮಂಜಸವಾದ ಸಾಕ್ಷ್ಯವಾಗಿದೆ. ಹಿಂದಿನಿಂದ ನಡೆದು ಬಂದ ರೋಮನ್ ನ್ಯಾಯಪದ್ಧತಿಯನ್ನು ಅನುಸಿರಿಸಿ, ಸನ್ನಿವೇಶಕ್ಕೆ ತಕ್ಕಂತೆ ಅವುಗಳಲ್ಲಿ ಮಾರ್ಪಾಡುಗಳನ್ನು ಮಾಡಿ, ಆಧುನಿಕ ಕಾನೂನು ಸಂಹಿತೆಯನ್ನು ಅವನು ರೂಪಿಸಿದ. ಇದು ಸಿವಿಲ್ ಮತ್ತು ಕ್ರಿಮಿನಲ್ ವ್ಯವಹರಣೆಗಳಲ್ಲಿ ಇಂದಿಗೂ ಮಾರ್ಗದರ್ಶಕವಾಗಿದೆ. ತರ್ಕಬದ್ಧವಾದ ಮತ್ತು ಸರಳ ಭಾಷೆಯಲ್ಲಿ ರಚಿತವಾದ ಕೋಡ್ ನೆಪೋಲಿಯನ್ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿದೆ. ಇದು ನೆಪೋಲಿಯನ್ನನ ವ್ಯಕ್ತಿತ್ವವನ್ನು ತೋರಿಸುವಂತೆ ಅವನ ಮತ್ತಾವ ಕೃತಿಯೂ ತೋರಿಸುವುದಿಲ್ಲ.

	ಫ್ರಾನ್ಸಿನ ಕೈಬಿಟ್ಟು ಹೋಗಿದ್ದ ಇಟಲಿಯನ್ನು ವಶಪಡಿಸಿಕೊಳ್ಳುವ ಸಲುವಾಗಿ ನೆಪೋಲಿಯನ್ ಆಲ್ಫ್ಸ್ ಪರ್ವತದ ಮೂಲಕ ಇಟಲಿಗೆ ನುಗ್ಗಿ ಆಸ್ಟ್ರಿಯನ್ ಸೇನೆಯನ್ನು ಸೋಲಿಸಿದ. ಆಸ್ಟ್ರಿಯ ಅವನ ಜೊತೆ ಒಪ್ಪಂದ ಮಾಡಿಕೊಳ್ಳಬೇಕಾಯಿತು. 1802ರಲ್ಲಿ ಏಮಿಯನ್ಸ್‍ನಲ್ಲಿ ಬ್ರಿಟಿಷರೊಡನೆ ಶಾಂತಿ ಕೌಲನ್ನು ಮಾಡಿಕೊಂಡ ಮೇಲೆ, ಎರಡನೆಯ ಒಕ್ಕೂಟವೂ ಕೊನೆಗೊಂಡಿತು.

	ಯುದ್ಧ ನಿಂತಿದ್ದರೂ ಫ್ರಾನ್ಸಿನ ಪ್ರಗತಿಯನ್ನು ನೋಡಿ ಇತರ ರಾಷ್ಟ್ರಗಳ ನಾಯಕರು ಅಸೂಯೆಪಟ್ಟರು. ನೆಪೋಲಿಯನ್ನನ ಶಕ್ತಿಯನ್ನು ಕುಂದಿಸಲು ಸಮಯ ಕಾಯುತ್ತಿದ್ದರು. ಮಾಲ್ಟಾ ದ್ವೀಪದ ವಿಷಯದಲ್ಲಿ ವಿವಾದ ಹುಟ್ಟಿದಾಗ ಇಂಗ್ಲೆಂಡು ಫ್ರಾನ್ಸಿನ ಮೇಲೆ ಯುದ್ಧ ಘೋಷಿಸಿತು. ಯುದ್ಧವಿರಾಮ ಕಾಲದಲ್ಲಿ ನೆಪೋಲಿಯನ್ ಫ್ರೆಂಚ್ ಸೇನೆಯನ್ನು ಸಜ್ಜುಗೊಳಿಸುತ್ತ ನೌಕಾಬಲವನ್ನು ಹೆಚ್ಚಿಸುವುದರಲ್ಲಿ ಮಗ್ನನಾಗಿದ್ದ.

	ಈ ಮಧ್ಯೆ ರಷ್ಯ ಮತ್ತು ಆಸ್ಟ್ರಿಯ ದೇಶಗಳು ಬ್ರಿಟನ್ನಿನ ನಾಯಕತ್ವದಲ್ಲಿ ಮೂರನೆಯ ಒಕ್ಕೂಟ ಮಾಡಿಕೊಂಡು ಫ್ರೆಂಚರ ಬಲವನ್ನು ಕುಗ್ಗಿಸುವುದಕ್ಕೆ ಹವಣಿಸಿದವು. ಇದು ಫ್ರಾನ್ಸಿಗೆ ಸಂದಿಗ್ಧ ಸಮಯವಾದರೂ ನೆಪೋಲಿಯನ್ ಧೃತಿಗೆಡದೆ, ಈ ಒಕ್ಕೂಟ ಕ್ರಾಂತಿಯನ್ನು ನಾಶಗೊಳಿಸುವ ಶಕ್ತಿಯಾಗಿದೆಯೆಂದು ಹೇಳಿ, ತಾನು ಕ್ರಾಂತಿಯ ಪ್ರತೀಕವೆಂದು ತಿಳಿಸಿ, 1804ರಲ್ಲಿ ತಾನು ಫ್ರಾನ್ಸಿನ ಚಕ್ರವರ್ತಿಯೆಂದು ಘೋಷಿಸಿಕೊಂಡ. 1804ರಿಂದ 1814ರವರೆಗೆ ಫ್ರಾನ್ಸಿನ ಚಕ್ರವರ್ತಿಯಾಗ, ಫ್ರೆಂಚ್ ಸೇನೆಯ ಮಹಾದಂಡನಾಯಕನಾಗಿ, ಯೂರೋಪ್ ಖಂಡವನ್ನು ತನ್ನ ಸಾಮ್ರಾಜ್ಯವನ್ನಾಗಿ ಪರಿವರ್ತಿಸಲು ಯತ್ನಿಸಿದ.

	ಮೂರನೆಯ ಒಕ್ಕೂಟದ ಸೇನೆ ಆಕ್ರಮಣ ನಡೆಸುವ ಮೊದಲೇ ನೆಪೋಲಿಯನ್ ಜರ್ಮನಿಯ ಮೇಲೆ ನುಗ್ಗಿ ಆಸ್ಟ್ರಿಯನ್ ಸೇನೆಯನ್ನು ಸೋಲಿಸಿದ. ಇದರಿಂದ ರಷ್ಯನರು ಹಿಂದೆಗೆಯಬೇಕಾಯಿತು. ಆದರೆ 1805ರಲ್ಲಿ ನಡೆದ ಟ್ರಫಾಲ್ಗರ್ ನೌಕಾ ಕದನದಲ್ಲಿ ಫ್ರಾನ್ಸ್ ಮತ್ತು ಸ್ಪೇನ್ ನೌಕಾಪಡೆಗಳು ಸಂಪೂರ್ಣವಾಗಿ ಸೋತು ಹೋದುವು. ಇದರ ಪರಿಣಾಮವಾಗಿ ಸಮುದ್ರ ಮೇಲೆ ಬ್ರಿಟಿಷರ ಪ್ರಭುತ್ವ ಸ್ಥಿರಪಟ್ಟಿತು. ಇಂಗ್ಲೆಂಡಿನ ಮೇಲೆ ದಂಡೆತ್ತಿ ಹೋಗಬೇಕೆಂದಿದ್ದ ನೆಪೋಲಿಯನ್ನನ ಆಸೆ ವಿಫಲವಾಯಿತು.

	ನೌಕಾಯುದ್ಧದಲ್ಲಿ ಸೋತರೂ, ಇಂಗ್ಲೆಂಡಿನ ಮೇಲೆ ತನ್ನ ಪ್ರಭುತ್ವ ಸ್ಥಾಪಿಸಬೇಕೆಂಬ ಆಸೆ ನಿರಾಸೆಯಾದರೂ ನೆಪೋಲಿಯನ್ ಯೂರೋಪಿನಲ್ಲಿ ನಡೆದ ಕದನಗಳಲ್ಲಿ ವಿಜಯಿಯಾದ. 1805ರ ಡಿಸೆಂಬರ್‍ನಲ್ಲಿ ರಷ್ಯ ಮತ್ತು ಆಸ್ಟ್ರಿಯ ರಾಷ್ಟ್ರಗಳ ಸಂಯುಕ್ತ ಸೇನೆಯನ್ನು ಆಸ್ಟರ್ಲಿಡ್ಸ್ ಕದನದಲ್ಲಿ ಸಂಪೂರ್ಣವಾಗಿ ಸೋಲಿಸಿದ. ಆ ಅದ್ಭುತ ವಿಜಯದಿಂದ ನೆಪೋಲಿಯನ್ನನ ಕೀರ್ತಿ ಇಮ್ಮಡಿಸಿತು. ಮೂರನೆಯ ಒಕ್ಕೂಟ ಕೊನೆಗೊಂಡಿತು. ಆ ಸಮಯದಲ್ಲಿದ್ದ ಬ್ರಿಟಿಷ್ ಮುಖ್ಯಮಂತ್ರಿ ವಿಲಿಯಂ ಪಿಟ್ ತನ್ನ ಕಛೇರಿಯಲ್ಲಿದ್ದ ಯೂರೋಪಿನ ಭೂಪಟದ ಕಡೆ ಕೈ ತೋರಿಸಿ ಆ ಭೂಪಟವನ್ನು ಮುದುರಿಡಿ, ಇನ್ನು ಹತ್ತು ವರ್ಷಗಳ ಕಾಲ ಅದರ ಅವಶ್ಯಕತೆಯೇ ಇರುವುದಿಲ್ಲ ಎಂದಿನಂತೆ ಆ ಭವಿಷ್ಯ ಅಕ್ಷರಶಃ ನಿಜವಾಯಿತು. ತಾನು ಗೆದ್ದ ರಾಜ್ಯಗಳಲ್ಲಿ ನೆಪೋಲಿಯನ್ ತನ್ನ ನೆಂಟರನ್ನು ಅಧಿಕಾರದಲ್ಲಿ ಇರಿಸಿದ. ಯೂರೋಪನ್ನು ತನ್ನ ಆಸ್ತಿಯೆಂದು ಪರಿಗಣಿಸಿ, ಜನತೆಯ ಆಸೆ ಆಕಾಂಕ್ಷೆಗಳನ್ನು ಕಡೆಗಣಿಸಿ ಕೊನೆಗೆ ಎಲ್ಲರ ಶತ್ರುವಾದ.

	1806ರಲ್ಲಿ ಬ್ರಿಟನ್, ಪ್ರಷ್ಯ ಮತ್ತು ರಷ್ಯಗಳು ಮತ್ತೆ ಒಂದುಗೂಡಿ ನಾಲ್ಕನೆಯ ಒಕ್ಕೂಟ ಸ್ಥಾಪಿಸಿದವು. ಆದಾಗ್ಯೂ ಎರಡು ಕದನಗಳಲ್ಲಿ ನೆಪೋಲಿಯನ್ ಪ್ರಷ್ಯವನ್ನು ಸೋಲಿಸಿದ. ಪ್ರಷ್ಯನ್ ಸೇನೆ ಶರಣಾಗತವಾಯಿತು. ನೆಪೋಲಿಯನ್ ದಿಗ್ವಿಜಯವನ್ನು ಮುಂದುವರಿಸಿ ರಷ್ಯದ ಕಡೆ ನುಗ್ಗಿದ. ರಷ್ಯನ್ ಸೇನೆಯನ್ನು ಫ್ರೀಡ್‍ಲ್ಯಾಂಡ್ ಕದನದಲ್ಲಿ ಸೋಲಿಸಿದ. ರಷ್ಯದ ಚಕ್ರವರ್ತಿ ಅಲೆಗ್ಸಾಂಡರ್ ನೆಪೋಲಿಯನ್ನನೊಡನೆ ಶಾಂತಿ ಒಪ್ಪಂದ ಮಾಡಿಕೊಂಡು ಒಕ್ಕೂಟವನ್ನು ತ್ಯಜಿಸಿದ.

	ನಾಲ್ಕನೆಯ ಒಕ್ಕೂಟ ನಾಶವಾದರೂ ಇಂಗ್ಲೆಂಡ್ ಬಲಯುತ ರಾಷ್ಟ್ರವಾಗಿಯೇ ಉಳಿದಿತ್ತು. ಯೂರೋಪಿನ ಇತರ ರಾಷ್ಟ್ರಗಳ ಸೇನೆ ಸೋತು ಶರಣಾಗತವಾಗಿದ್ದರೂ ಬ್ರಿಟಿಷ್ ಪಡೆಗಳು ಸೋತಿರಲಿಲ್ಲ. ಸಮುದ್ರದ ಮೇಲಿನ ಹತೋಟಿ ಎಂದಿನಂತೆ ಮುಂದುವರಿದಿತ್ತು. ಯೂರೋಪಿನ ಮೇಲೆ ಪ್ರಭುತ್ವವನ್ನು ಸ್ಥಾಪಿಸಿದರೂ ನೆಪೋಲಿಯನ್ ಸುಖಿಯಾಗಿರಲಿಲ್ಲ. ಸ್ವದೇಶಕ್ಕೆ ಸಮೀಪದಲ್ಲಿದ್ದರೂ ಸ್ವತಂತ್ರವಾದ ಪ್ರಬಲವಾದ ಇಂಗ್ಲೆಂಡನ್ನು ಸೋಲಿಸಲು, ಅದರ ಪ್ರತಿಷ್ಠೆಯನ್ನು ಕುಂದಿಸಲು ಸಾಧ್ಯವಾಗಿರಲಿಲ್ಲ. ತನ್ನ ಪರಮ ಮತ್ತು ಪ್ರಥಮ ಶತ್ರುವೆಂದು ಭಾವಿಸಿದ ಇಂಗ್ಲೆಂಡನ್ನು ಹೇಗಾದರೂ ಮಾಡಿ ಅಡಗಿಸಬೇಕೆಂದು ನಿರ್ಧರಿಸಿ ನೆಪೋಲಿಯನ್ ಆ ರಾಜ್ಯದ ವ್ಯಾಪಾರ ವಾಣಿಜ್ಯಗಳನ್ನು ತೊಡೆದುಹಾಕಲು ಹವಣಿಸಿದ. ತನಗೆ ಸೇರಿದ, ತನ್ನ ಹತೋಟಿಯಲ್ಲಿದ್ದ ಯೂರೋಪಿನ ರಾಷ್ಟ್ರಗಳು ಬ್ರಿಟನ್ನಿನೊಡನೆ ಯಾವ ಬಗೆಯ ವ್ಯಾಪಾರ ಸಂಬಂಧವನ್ನೂ ಹೊಂದಿರಕೂಡದೆಂದು ಆಜ್ಞೆ ಹೊರಡಿಸಿದ. 1806ರಲ್ಲಿ ಬರ್ಲಿನ್ ಮತ್ತು ಮಿಲಾನ್ ಶಾಸನಗಳ ಮೂಲಕ ಖಂಡಾಂತರ ಪದ್ಧತಿಯನ್ನು ಜಾರಿಗೆ ತಂದ. ಇದರ ಪ್ರಕಾರ ಯೂರೋಪಿನ ರಾಷ್ಟ್ರಗಳು ಇಂಗ್ಲೆಂಡಿನೊಡನೆ ಯಾವ ಸಂಬಂಧವನ್ನೂ ಹೊಂದಿರಲು ಅವಕಾಶವಿರಲಿಲ್ಲ.

	ಈ ಪದ್ಧತಿಯಿಂದ ಬ್ರಿಟನ್ನಿಗೆ ತೊಂದರೆಯಾದ್ದು ನಿಜವಾದರೂ, ಯೂರೋಪಿನ ರಾಷ್ಟ್ರಗಳಿಗೆ ಹೆಚ್ಚು ಹಾನಿಯಾಯಿತು. ಯೂರೋಪಿಗೆ ಬರುತ್ತಿದ್ದ ಆಹಾರ ವಸ್ತುಗಳು ನಿಂತೇ ಹೋಗಿ ಆಹಾರದ ಅಭಾವ ತಲೆದೋರಿತು. ಈ ಕ್ರಮದಿಂದಾಗಿ ನೆಪೋಲಿಯನ್ ತನ್ನ ವಿನಾಶಕ್ಕೆ ತಾನೇ ಕಾರಣ ಸೃಷ್ಟಿಸಿಕೊಂಡಂತಾಯಿತು. ನೆಪೋಲಿಯನ್ನನ ಪತನಕ್ಕೆ ಇದು ಕಾರಣವಾಯಿತು.

	ಈ ಪದ್ಧತಿಯ ವಿರುದ್ಧ ಪೋರ್ಚುಗೀಸರು ಮೊದಲು ದಂಗೆಯೆದ್ದರು. 1808ರಲ್ಲಿ ಸ್ಪೇನಿನ ಜನತೆ ಸ್ವದೇಶಾಭಿಮಾನದಿಂದ ಫ್ರೆಂಚ್ ಆಡಳಿತದ ವಿರುದ್ಧ ಬಂಡೆದ್ದರು. ನೆಪೋಲಿಯನ್ ವಿರುದ್ಧ ಶಕ್ತಿಗಳು ಹೆಚ್ಚಿದವು. ಬ್ರಿಟಿಷರೂ ಈ ವಿರೋಧಿ ಪಂಥಕ್ಕೆ ಬೆಂಬಲ ನೀಡಿದರು. ಇದು ಮುಂದೆ ಐಬೀರಿಯನ್ ಪರ್ಯಾಯ ದ್ವೀಪದ ಯುದ್ಧವಾಗಿ ಪರಿಣಮಿಸಿತು. ವಿರೋಧಿ ಬಣಗಳು ಹೆಚ್ಚುತ್ತಿದ್ದರೂ ನೆಪೋಲಿಯನ್ ತನ್ನನ್ನು ವಿರೋಧಿಸಿದ ಆಸ್ಟ್ರಿಯನ್ ಸೇನೆಯನ್ನು ಸೋಲಿಸಿದ. 1810ರಲ್ಲಿ ನೆಪೋಲಿಯನ್ನನ ಕೀರ್ತಿ ಉನ್ನತಿಯ ಶಿಖರ ಮುಟ್ಟಿತೆಂದು ಹೇಳಬಹುದು. ಅವನ ಸಾಮ್ರಾಜ್ಯ ಯೂರೋಪಿನ ಎಲ್ಲ ಭಾಗಗಳಲ್ಲೂ ಪ್ರಸರಿಸಿತ್ತು. ರಷ್ಯದ ಚಕ್ರವರ್ತಿ ನೆಪೋಲಿಯನ್ನನ ಸ್ನೇಹಿತನಾಗಿದ್ದ. ಅದೇ ವರ್ಷದಲ್ಲಿ ಆಸ್ಟ್ರಿಯದ ಚಕ್ರವರ್ತಿಯ ತಂಗಿ ಮೇರಿ ಲೂಯಿಯನ್ನು ನೆಪೋಲಿಯನ್ ಮದುವೆಯಾದ. ಇದರಿಂದ ಅವನ ಪ್ರತಿಷ್ಠೆ ಪರಾಕಾಷ್ಠೆ ಮುಟ್ಟಿತು.

	ಆದರೆ ಕೇವಲ 2 ವರ್ಷಗಳಲ್ಲಿ ನೆಪೋಲಿಯನ್ನನ ಅದೃಷ್ಟ ಇಳಿಮುಖವಾಯಿತು. 1812ರಲ್ಲಿ ರಷ್ಯನರು ಖಂಡಾಂತರ ಪದ್ಧತಿಗೆ ವಿರುದ್ಧವಾಗಿ ಇಂಗ್ಲೆಂಡಿನೊಡನೆ ವ್ಯಾಪಾರ ಪ್ರಾರಂಭಿಸಿದಾಗ ನೆಪೋಲಿಯನ್ ಸಿಟ್ಟಾಗಿ ರಷ್ಯದ ಮೇಲೆ ದಂಡೆತ್ತಿ ಹೋದ. ಬೊರೊಡಿನೊ ಯುದ್ಧದಲ್ಲಿ ರಷ್ಯನರನ್ನು ಸಂಪೂರ್ಣವಾಗಿ ಸೋಲಿಸಿ ಮಾಸ್ಕೋ ನಗರವನ್ನು ಪ್ರವೇಶಿಸಿದ. ಆದರೆ ರಷ್ಯನರು ನಗರವನ್ನೇ ತ್ಯಜಿಸಿದ್ದರಿಂದ ಅವನಿಗೆ ಯಾವ ಉಪಯೋಗವೂ ಆಗಲಿಲ್ಲ. ಜೊತೆಗೆ ರಷ್ಯದಲ್ಲಿ ಚಳಿಗಾಲ ಪ್ರಾರಂಭವಾಗಿತ್ತು. ಆಹಾರದ ಅಭಾವ, ತಡೆಯಲಾರದ ಚಳಿಯ ಕೊರೆತ ಮುಂತಾದ ತೊಂದರೆಗಳಿಂದ ಫ್ರೆಂಚ್ ಸೇನೆ ಕಷ್ಟ ಅನುಭವಿಸಿತು. ಈ ಸಂದಿಗ್ಧ ಸಮಯದಲ್ಲಿ ರಷ್ಯನರು ಫ್ರೆಂಚರ ಮೇಲೆ ಬೀಳಲು ಸನ್ನದ್ಧರಾದರು. ಹಿಮ್ಮೆಟ್ಟುತ್ತಿದ್ದ ಫ್ರೆಂಚ್ ಸೇನೆ ಅಪಾರ ನಷ್ಟ ಅನುಭವಿಸಿತು. ಸೇನೆಯ ಒಂದು ಭಾಗ ಮಾತ್ರ ಫ್ರಾನ್ಸಿಗೆ ಹಿಂದಿರುಗಲು ಸಾಧ್ಯವಾಯಿತು. ರಷ್ಯದ ದುರಂತ ನೆಪೋಲಿಯನ್ನನ ಪತನಕ್ಕೆ ಅಣಿಮಾಡಿಕೊಟ್ಟಿತು.

	ನಿರಾಶನಾಗಿ ನೆಪೋಲಿಯನ್ ಹಿಂದಿರುಗಿದುದನ್ನು ತಿಳಿದು ಯೂರೋಪಿನ ರಾಷ್ಟ್ರಗಳು ಅವನ ಪ್ರಭುತ್ವವನ್ನು ಕೊನೆಗೊಳಿಸಿ ಸ್ವತಂತ್ರವಾಗಲು ಹವಣಿಸಿದವು. ರಷ್ಯ, ಪ್ರಷ್ಯ, ಸ್ವೀಡನ್, ಆಸ್ಟ್ರಿಯ, ಇಂಗ್ಲೆಂಡ್- ಇವು ಫ್ರಾನ್ಸಿನ ವಿರುದ್ಧ ಗುಂಪು ಕಟ್ಟಿಕೊಂಡು ನೆಪೋಲಿಯನ್ನನ್ನು ಎದುರಿಸಲು ಸನ್ನದ್ಧವಾದವು. ಹಲವಾರು ಕದನಗಳಲ್ಲಿ ಉತ್ತಮ ಯೋಧನನ್ನು ಕಳೆದುಕೊಂಡಿದ್ದ ನೆಪೋಲಿಯನ್ ಮತ್ತೆ ಸೇನೆಯನ್ನು ಸಜ್ಜುಗೊಳಿಸಲು ಸಾಧ್ಯವಾಗಲಿಲ್ಲ. ಆದರೂ ಅವನು ಯುದ್ಧ ನೀತಿಯಿಂದ ಹಿಂತೆಗೆಯುವ ಪ್ರಶ್ನೆಯೇ ಇರಲಿಲ್ಲ. ಅವನ ಅಳಿವು ಉಳಿವುಗಳು ಯುದ್ಧವನ್ನೇ ಅವಲಂಬಿಸಿದ್ದುವು. ಆದರೆ ಮುಂದೆ ನಡೆದ ಕದನಗಳಲ್ಲಿ ಸೋಲಿನ ಸರಪಳಿಯೇ ಬೆಳೆಯಿತು. ಒಂದೆರಡು ಕಡೆ ಗೆದ್ದರೂ ಹಲವೆಡೆಗಳಲ್ಲಿ ಅವನ ಸೇನೆಗಳು ಸೋತವು. ನೆಪೋಲಿಯನ್ ಫ್ರಾನ್ಸಿಗೆ ಹಿಂದಿರುಗಬೇಕಾಯಿತು.

	ಈ ಅವಕಾಶವನ್ನು ಉಪಯೋಗಿಸಿಕೊಂಡು ಒಕ್ಕೂಟ ಸೇನೆಗಳು 1814ರಲ್ಲಿ ಫ್ರಾನ್ಸಿನ ಗಡಿ ದಾಟಿ ಡಿಸೆಂಬರ್ 31ರಂದು ರಾಜಧಾನಿಯಾದ ಪ್ಯಾರಿಸ್ ನಗರವನ್ನು ಪ್ರವೇಶಿಸಿದವು. ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಫ್ರೆಂಚ್ ಸೇನೆಯ ಬಲ ಕಡಿಮೆಯಾಗಿತ್ತು. ಈ ಪರಿಸ್ಥಿತಿಯಲ್ಲಿ ನೆಪೋಲಿಯನ್ ಯುದ್ಧವನ್ನು ಮುಂದುವರಿಸುವ ಸ್ಥಿತಿಯಲ್ಲಿರಲಿಲ್ಲ. ಆದ್ದರಿಂದ ಅವನು ಸಿಂಹಾಸನವನ್ನು ತ್ಯಜಿಸಲು ಒಪ್ಪಿದ. ಏಪ್ರಿಲ್ 11ರಂದು ಚಕ್ರವರ್ತಿ ಪದವಿಯನ್ನು ಬಿಟ್ಟುಕೊಟ್ಟ. ಒಕ್ಕೂಟದ ನಾಯಕರು ಸಭೆ ಸೇರಿ, ನೆಪೋಲಿಯನ್ ಫ್ರಾನ್ಸನ್ನು ಬಿಟ್ಟು ಹೋಗಬೇಕೆಂದೂ ಎಲ್ಬ ದ್ವೀಪದಲ್ಲಿರಬೇಕೆಂದೂ ತೀರ್ಮಾನಿಸಿದವು. ಯೂರೋಪಿನ ಭವಿಷ್ಯವನ್ನು ನಿರ್ಧರಿಸಲು, ರಾಷ್ಟ್ರಗಳ ರೂಪುರೇಖೆಗಳನ್ನು ರೂಪಿಸಲು ಒಕ್ಕೂಟದ ನಾಯಕರು ವಿಯನ್ನ ನಗರದಲ್ಲಿ ಸಭೆ ಸೇರಿದರು. ಆದರೆ ನೆಪೋಲಿಯನ್ನನಂಥ ಬಲಶಾಲಿ ಎಲ್ಬದಲ್ಲಿ ಕಾಲ ಕಳೆಯಲು ಸಾಧ್ಯವೇ ಇಲ್ಲ. ಫ್ರಾನ್ಸಿನಲ್ಲಿದ್ದ ಅವನ ಅನುಯಾಯಿಗಳು ನೆಪೋಲಿಯನ್ನನನ್ನು ಮತ್ತೆ ಬರಮಾಡಿಕೊಂಡರು. 1815ರ ಮಾರ್ಚ್‍ನಲ್ಲಿ ನೆಪೋಲಿಯನ್ ಹಿಂದಿರುಗಿದ. ಅವನಿಗೆ ಅದ್ಭುತ ಸ್ವಾಗತ ದೊರಕಿತು. ಬೆಂಬಲಿಗರು ಮತ್ತೆ ಅವನನ್ನು ಕೂಡಿಕೊಂಡರು. ಅವನ ಸೋಲುಗೆಲುವುಗಳಲ್ಲಿ ಪಾಲ್ಗೊಂಡಿದ್ದ ಸೈನ್ಯಾಧಿಕಾರಿಗಳು ಸೈನಿಕರೂ ನೆಪೋಲಿಯನ್ನನ ಪರವಾಗಿ ಯುದ್ಧ ಮಾಡಲು ಮುಂದೆ ಬಂದರು. ಇತ್ತಕಡೆ ಮಿತ್ರರಾಷ್ಟ್ರಗಳು ಯೂರೋಪಿನ ರಾಜ್ಯಗಳ ಗಡಿಗಳನ್ನು ನಿರ್ಧರಿಸುತ್ತಿರುವಾಗ ಅತ್ತಕಡೆ ನೆಪೋಲಿಯನ್ ಮತ್ತೆ ಫ್ರಾನ್ಸಿನ ಚಕ್ರವರ್ತಿಯಾದ. ನೆಪೋಲಿಯನ್ ಸಾಕಷ್ಟು ಸೇನೆಯನ್ನು ಸಜ್ಜುಗೊಳಿಸಿ ಬೆಲ್ಜಿಯಂ ಕಡೆ ನುಗ್ಗಿದ. ಅಲ್ಲಿ ಒಕ್ಕೂಟದ ಸೇನೆಯ ದಳಪತಿಯಾದ ಡ್ಯೂಕ್ ಆಫ್ ವೆಲ್ಲಿಂಗ್ಟನ್ ಪ್ರಷ್ಯದ ಸೇನಾಧಿಪತಿ ಬ್ಲೂಷರನೊಡಗೂಡಿ ಫ್ರೆಂಚ್ ಸೇನೆಯನ್ನು ಎದುರಿಸಿದ. ಪ್ರಷ್ಯನ್ ಸೇನೆಯ ಒಂದು ತುಕಡಿಯನ್ನು ನೆಪೋಲಿಯನ್ ಸೋಲಿಸಿದರೂ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ವೆಲ್ಲಿಂಗ್ಟನ್ನನ ನೇತೃತ್ವದಲ್ಲಿ ಒಕ್ಕೂಟ ಸೇನೆ ವಾಟರ್ಲೂ ಬಳಿ ಸೇರಿತು. 1815ರ ಜೂನ್ 17ರಂದು ನೆಪೋಲಿಯನ್ನನ ಸೇನೆ ಅದಕ್ಕೆ ಎದುರಾಗಿ ನಿಂತಿತು. ವಾಟರ್ಲೂ ಕದನ ನೆಪೋಲಿಯನ್ನನ ಕೊನೆಯ ಕದನ. ಅವನ ಕಡೆ 74,000 ಸೈನಿಕರೂ ಮಿತ್ರರಾಷ್ಟ್ರಗಳ ಕಡೆ 68,000 ಸೈನಿಕರೂ ಎದುರುಬದುರಾಗಿ ನಿಂತು ಯುದ್ಧ ಮಾಡಿದರು. ವೆಲ್ಲಿಂಗ್ಟನ್ ಮತ್ತು ಬ್ಲೂಷರ್ ನಾಯಕತ್ವದಲ್ಲಿ ಒಕ್ಕೂಟದ ಸೇನೆ ಶೌರ್ಯದಿಂದ ಹೋರಾಡಿ, ನೆಪೋಲಿಯನ್ನನ ಸೇನೆಯನ್ನು ಸೋಲಿಸಿತು. ನೆಪೋಲಿಯನ್ ಶರಣಾಗತನಾಗಬೇಕಾಯಿತು. ಒಕ್ಕೂಟದ ನಾಯಕರು ಅವನನ್ನು ಸೇಂಟ್ ಹೆಲೀನ ದ್ವೀಪಕ್ಕೆ ಗಡಿಪಾರು ಮಾಡಿದರು. ನೂರು ದಿನಗಳ ಕಾಲ ಚಕ್ರವರ್ತಿ ಪದವಿಯನ್ನು ಮತ್ತೆ ಅನುಭವಿಸಿದ್ದ ನೆಪೋಲಿಯನ್ ಕೊನೆಗಾಲದ ಆರು ವರ್ಷಗಳನ್ನು ಅಟ್ಲಾಂಟಿಕ್ ಸಾಗರದ ಆ ಸಣ್ಣ ದ್ವೀಪದಲ್ಲಿ ಏಕಾಂತವಾಗಿ ಕಳೆಯಬೇಕಾಯಿತು.

	ಸೇಂಟ್ ಹೆಲೀನದಲ್ಲಿ ತನ್ನ ಜೀವನದ ಸ್ಮøತಿಗಳನ್ನೂ ತನ್ನ ಸಾಧನೆಯ ಪುಟಗಳನ್ನೂ ತಿರುವು ಹಾಕುತ್ತ ಮೆಲುಕು ಹಾಕುತ್ತಿದ್ದಾಗ, ನಲವತ್ತು ಕದನಗಳಲ್ಲಿ ಗಳಿಸಿದ ಜಯಕ್ಕಿಂತಲೂ ತಾನು ರೂಪಿಸಿ ರಚಿಸಿದ ಕಾನೂನುಸಂಹಿತೆಯೇ ಹೆಚ್ಚು ಶಾಶ್ವತವಾದ್ದು, ಕೀರ್ತಿದಾಯಕವಾದ್ದು ಎಂದು ಅವನು ಒಮ್ಮೆ ಅಂದುಕೊಂಡನೆಂದು ಹೇಳಲಾಗಿದೆ. ನೆಪೋಲಿಯನ್ ಆಧುನಿಕ ಫ್ರಾನ್ಸಿಗೆ ಅಗತ್ಯವಾದ ಭದ್ರವಾದ ಬುನಾದಿಯನ್ನು ಹಾಕಿದ. ಅತ್ಯುನ್ನತ ಆಡಳಿತ ಯಂತ್ರ, ಕೋಡ್ ನೆಪೋಲಿಯನ್, ಸಮರ್ಥ ನ್ಯಾಯಾಂಗ ವ್ಯವಸ್ಥೆ, ಫ್ರಾನ್ಸಿನ ಬ್ಯಾಂಕ್, ವ್ಯವಸ್ಥಿತ ಹಣಕಾಸಿನ ಆಡಳಿತ, ಪ್ಯಾರಿಸ್ ವಿಶ್ವವಿದ್ಯಾಲಯ-ಇವು ಅವನು ಫ್ರಾನ್ಸಿಗೆ, ಯೂರೋಪಿಗೆ ನೀಡಿದ ಉತ್ತಮ ಕೊಡುಗೆಗಳು. ಈ ಸಾಧನೆಯಿಂದಾಗಿ ಫ್ರಾನ್ಸಿನ ಇತಿಹಾಸದಲ್ಲಿ, ಯೂರೋಪಿನ ಇತಿಹಾಸದಲ್ಲಿ ನೆಪೋಲಿಯನ್ನನಿಗೆ ವಿಶಿಷ್ಟ ಸ್ಥಾನವಿದೆ.

	ನೆಪೋಲಿಯನ್ 1821ರ ಮೇ 8ರಂದು ಕ್ಯಾನ್ಸರ್ ಕಾಯಿಲೆಯಿಂದ ನಿಧನ ಹೊಂದಿದ. ಅವನ ಹಿರಿಮೆಯನ್ನು ಕ್ರಮೇಣ ಮನಗಂಡ ಫ್ರೆಂಚರು ಸೇಂಟ್ ಹೆಲೀನಾದಲ್ಲಿ ಹೂತಿಟ್ಟಿದ್ದ ಅವನ ದೇಹವನ್ನು 1840ರಲ್ಲಿ ತೆಗೆಸಿ ಪ್ಯಾರಿಸ್ಸಿಗೆ ತಂದು ಅವನ ಸ್ಥಾನಮಾನಗಳಿಗೆ ತಕ್ಕಂತೆ ಸೈನಿಕ ಸ್ಮಾರಕ ಮಂದಿರದ ಅಂಗಳದಲ್ಲಿ ಸಮಾಧಿ ಮಾಡಿ, ಅವನಿಗಾಗಿ ಗೋರಿ ನಿರ್ಮಿಸಿ ಅವನನ್ನು ಗೌರವಿಸಿದರು.											(ಕೆ.ಟಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ